ಕೆತ್ತನೆ ಕೆಲಸ

ಮರ, ದಂತ, ಕೊಂಬು ಮತ್ತು ಚಿನ್ನ, ಬೆಳ್ಳಿ, ತಾಮ್ರ ಮೊದಲಾದ ಲೋಹಗಳು-ಇವನ್ನು ಬಳಸಿಕೊಂಡು ಉಳಿ, ಬಾಚಿ, ಚಾಣ ಮೊದಲಾದ ಹತಾರುಗಳನ್ನುಪಯೋಗಿಸಿ ಕಲಾತ್ಮಕವಾದ ವಸ್ತುಗಳನ್ನು ತಯಾರಿಸುವ ಕೆಲಸವನ್ನು ಒಟ್ಟಾಗಿ ಈ ಹೆಸರಿನಿಂದ ಕರೆಯುತ್ತಾರೆ (ಕಾರ್ವಿಂಗ್). ಈ ಕೆಲಸದಲ್ಲಿ ಕೆತ್ತನೆಯೊಂದಿಗೆ ಕೊಯ್ತ, ಕೊರೆತ, ಸಮೆತ, ಕೂಡಣೆ, ಜೋಡಣೆ, ಬಣ್ಣಗಾರಿಕೆ, ಮೆರಗು ಕೊಡುವುದು, ಕುಂದಣಗಾರಿಕೆ ಮುಂತಾದ ಅನೇಕ ಕ್ರಿಯೆಗಳೂ ಸೇರುತ್ತವೆ. ಇದು ಶುದ್ಧ ಕಲೆಯೂ ಹೌದು, ಉಪಯುಕ್ತ ಕಲೆಯೂ ಹೌದು. ನೇಗಿಲು, ಗಾಡಿ, ಕಡೆಗೋಲು, ಮಣೆ, ಮಂಚ, ಪೀಠ ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನೂ ಬಾಚಣೆಗೆ, ಸಮಪುಷ್ಟ ಮೊದಲಾದುವನ್ನೂ ತಪ್ಪಲೆ, ಕವಳಿಗೆ, ಥಾಲಿ, ತಂಬಿಗೆಗಳನ್ನೂ ತಯಾರಿಸುವುದು ಉಪಯುಕ್ತ ಕಲೆಗೆ ಸೇರುತ್ತದೆ. ಇವನ್ನು ಕೂರಿಸುವಾಗ ಉಪಯೋಗದ ಜೊತೆಗೆ ಅಲಂಕರಣಕ್ಕೆ ಗಮನಕೊಟ್ಟಾಗಲೂ ರಥ, ದೇವತಾವಿಗ್ರಹಗಳು, ಮಂದಾಸನ ಮೊದಲಾದುವನ್ನು ಕಲಾತ್ಮಕವಾಗಿ ತಯಾರಿಸುವಾಗಲೂ ಇದು ಶುದ್ಧ ಕಲೆಗೆ ಸಂಬಂಧಪಟ್ಟದಾಗುತ್ತದೆ. 

ಲೋಹದ ಬಳಕೆ ಇನ್ನೂ ಏರ್ಪಡದ ಪ್ರಾಚೀನ ಕಾಲದಲ್ಲಿ ಆದಿಮಾನವ ವಿವಿಧ ಕಲ್ಲಿನಾಯುಧಗಳನ್ನು ಬಳಸಿ ತನಗೆ ಬೇಕಾದ ಮರದ ಸಾಮಾನುಗಳನ್ನು ಮಾಡಿಕೊಳ್ಳುತ್ತಿದ್ದನಷ್ಟೆ. ಮೊಟ್ಟಮೊದಲಿಗೆ ಮರ ಆದಿಮಾನವನಿಗೆ ದೇವತಾ ಸಮಾನವೆನಿಸಿತ್ತು. ಅದರಿಂದವನು ತನಗೆ ಬೇಕಾದ ನೇಗಿಲು, ದೋಣಿ, ಪೀಠ, ಮೊಗವಾಡ ಮೊದಲಾದುವನ್ನು ಮಾಡಿಕೊಳ್ಳುತ್ತಿದ್ದ. ಮರ ಒಂದೆರಡು ಶತಮಾನಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲವಾಗಿ ಆದಿಮಾನವನಿರ್ಮಿತವಾದ ಯಾವ ಮರದ ಸಾಮಾನೂ ಉಳಿದುಬಂದಿಲ್ಲ. ಗಾಳಿ ಮಳೆ ಬಿಸಿಲು ಚಳಿ ಹುಳುಹುಪ್ಪಟೆಗಳಿಂದಾಗಿ ಅವು ಹಾಳಾದುವು. ಇಷ್ಟಾದರೂ ಮರದ ಕೆತ್ತನೆ ಹಿಂದಿನ ಕಾಲದಲ್ಲಿ ಹೇಗಿತ್ತೆಂಬುದಕ್ಕೆ ಇಂದಿಗೂ ಉಳಿದು ಬಂದಿರುವ ಶಿಲಾಶಿಲ್ಪ ಪ್ರಬಲ ಸಾಕ್ಷಿಯಾಗಿದೆ. ಏಕೆಂದರೆ ಶಿಲೆಯಲ್ಲಿ ಕೆಲಸ ಮಾಡುವ ಶಿಲ್ಪಿಗಳಿಗೆ ಹಿಂದಿನವರ ಮರದ ಕೆತ್ತನೆ ಕೆಲಸಗಳು ಮಾದರಿಗಳಾಗಿದ್ದವು.

ಮಹಾಭಾರತದ ಆದಿಪರ್ವದಲ್ಲಿ ರಾಕ್ಷಸಶಿಲ್ಪಿ ಮಯ, ಪಾಂಡವರಿಗಾಗಿ ಇಂದ್ರ ಪ್ರಸ್ಥನಗರದಲ್ಲಿ ಸಾಲಂಕೃತವಾದ ಸಭಾಭವನವೊಂದನ್ನು ಕಟ್ಟಿಕೊಟ್ಟನೆಂದು ಹೇಳಲಾಗಿದೆ. ರಾಕ್ಷಸರಿಗೆ ಮಯ ಹೇಗೋ ಹಾಗೆ ದೇವತೆಗಳಿಗೆ ವಿಶ್ವಕರ್ಮ ಶಿಲ್ಪಿಯಾಗಿದ್ದನೆಂಬ ವಿಷಯವನ್ನಿಲ್ಲಿ ಗಮನಿಸಬಹುದು. ವಿಶ್ವಕರ್ಮ ಎಂಬ ಮಾತಿಗೆ ಕಾಲ ಕ್ರಮೇಣ ಬಡಗಿ ಎಂಬ ಸಾಮಾನ್ಯಾರ್ಥ ಬಂದಿತಲ್ಲದೆ ಇಂದಿನ ಬಡಗಿಗಳು ವಿಶ್ವಕರ್ಮನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ.

ಭಾರತದಲ್ಲಿ ಸದ್ಯಕ್ಕೆ ಅತಿ ಪ್ರಾಚೀನವೆನ್ನಲಾದ ಮರದ ಕೆತ್ತನೆಯ ಕೆಲಸವನ್ನು ಪಾಟಲೀಪುತ್ರದಲ್ಲಿನ ಅಶೋಕನ ಅರಮನೆಯ ಉಳಿಕೆಗಳಲ್ಲಿ ಕಾಣಬಹುದು. ಕಾರ್ಲಿಯ (ಕ್ರಿ.ಶ.ಸು.120) ಚೈತ್ಯದಲ್ಲಿನ ಒಂದು ಮರದ ತೆರೆ, ಸ್ತೂಪದಲ್ಲಿನ ಒಂದು ಮರದ ಚತ್ರಿ-ಇವೂ ಸಾಕಷ್ಟು ಪ್ರಾಚೀನ ಉಳಿಕೆಗಳೇ ಆಗಿವೆ. ಅಲೆಕ್ಸಾಂಡರನ ದಂಡಯಾತ್ರೆಯಿಂದೀಚೆಗೆ ಭಾರತದ ಮರಗೆಲಸ ಅನೇಕ ಹೊಸ ಪ್ರಭಾವಗಳಿಗೊಳಗಾಗಿ ವಿಸ್ತಾರವಾಗಿ ಬೆಳೆದಿದೆ.

ಕರ್ಣಾಟಕದಲ್ಲಿ ವಿಜಯನಗರದ ಕಾಲದಿಂದೀಚಿನ ರಥಗಳು ದೊರೆತಿವೆ. ಬನವಾಸಿಯ ಮರದ ರಥ 150 ವರ್ಷಗಳಷ್ಟು ಹಳೆಯದು. ಹಿಂದಿನಿಂದಲೂ ಅರಮನೆ ಗುರುಮನೆಗಳೂ ಶ್ರೀಮಂತರ ವಾಸಗೃಹಗಳೂ ಸಾರ್ವಜನಿಕ ಕಟ್ಟಡಗಳೂ ಕೆತ್ತನೆಯ ಕೆಲಸದ ಆಗರಗಳಾಗಿವೆ.

 (ನೋಡಿ- ಕೊಂಬಿನ-ಸಾಮಾನುಗಳು) 
 (ನೋಡಿ- ಗುಡಿಗಾರಿಕೆ)
 (ನೋಡಿ- ಚಿನ್ನ,-ಬೆಳ್ಳಿ,-ಕೆತ್ತನೆ)
 (ನೋಡಿ- ದಂತದ-ಕೆತ್ತನೆ) 								   
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ